“ಮೂಕವಾಡದ ಆಚೆ”

ನನಗೆ ಮುಖಕ್ಕೆ ಬಣ್ಣ ಹಚ್ಚಿಕೊಳ್ಳಬೇಕೆಂಬ ಅದಮ್ಯ ಬಯಕೆ ಉಂಟಾಗುತ್ತಿತ್ತು. ಬಣ್ಣ ಸಂಪಾದನೆ ಮಾಡಲು ನಾನು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೆ. ಬಿಳಿ ಮತ್ತು ಹಸಿರು ಬಣ್ಣ ನನಗೆ ಪ್ರಿಯವಾದುದು. ಅದನ್ನು ಸಂಪಾದನೆ ಮಾಡಲೇಬೇಕೆಂದು ನಾನು ಓಡುತ್ತಿದ್ದೆ. ಬಣ್ಣ ಹಚ್ಚಿ ಆದ ಬಳಿಕ ಮುಖ ನೋಡಿಕೊಳ್ಳಲು ಒಂದು ಕನ್ನಡಿಯನ್ನೂ ಸಹ ಜೊತೆಗೆ ಒಯ್ದಿದ್ದೆ. ಓಡಿ ಓಡಿ ತುಂಬಾ ದೂರ ಬಂದಿರಬೇಕು ನಾನು. ಮನೆಯ ದಾರಿ ಸರಿಯಾಗಿ ನೆನಪಾಗುತ್ತಿಲ್ಲ. ಆದರೂ ನಾನು ಛಲ ಬಿಡಲಿಲ್ಲ. ಸಮಯ ಕಳೆಯುತ್ತಾ ನನ್ನ ಹಠ ಪ್ರಾಮಾಣಿಕತೆಯ ಮೇಲೆ ವಿಜೃಂಭಿಸತೊಡಗಿತು. ಅಲ್ಲೇ ಕೈಗೆ ಸಿಕ್ಕಿದ ಕೆಂಪು ಮತ್ತು ಕಪ್ಪು ಬಣ್ಣವನ್ನೇ ನಾನು ಮುಖಕ್ಕೆ ಬಳಿದುಕೊಂಡೆ. ಕನ್ನಡಿಯಲ್ಲಿ ನೋಡಿದೊಡನೆ ನನಗೆ ನನ್ನ ಮೇಲೆಯೇ ಅಸಹ್ಯ ಉಂಟಾಯಿತು. ಬಣ್ಣವನ್ನು ತೊಳೆಯುವ ಎಲ್ಲ ಪ್ರಯತ್ನ ವ್ಯರ್ಥವಾಯಿತು. ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿತ್ತು. ಕೂಡಲೇ ನಾನು ನಾಲ್ಕೂ ದಿಕ್ಕುಗಳಲ್ಲಿ ನೋಡತೊಡಗಿದೆ. ಅದೋ ದೂರದಲ್ಲಿ ಅವನು ಜೋರಾಗಿ ಕೂಗುತ್ತ ಮುಖವಾಡ ಮಾರುತ್ತಿದ್ದ. ನಾನು ಓಡುತ್ತಾ ಅವನ ಬಳಿ ಬಂದೆ. ಒಂದು ಬೆಳ್ಳನೆಯ ಮುಖವಾಡ ಕೊಂಡು ತಂದೆ. ದಿನ ಪೂರ್ತಿ ಅದನ್ನೇ ಹಾಕಿಕೊಂಡೆ. ನನ್ನೇ ನಾನು ನೋಡಿಕೊಳ್ಳಲಿಲ್ಲ. ಮುಖವಾಡ ಅಷ್ಟು ಒಗ್ಗಿಹೋಯಿತು. ಅಸಹನೀಯವೆನಿಸಿದರೂ ಅದನ್ನ ಬಿಚ್ಚಲಿಲ್ಲ. ಆದರೆ ಕಾಣದ ಕೈಗಳು ಅದನ್ನು ಎಳೆಯತೊಡಗಿದವು. ಕೆಲವೇ ದಿನಗಳಲ್ಲಿ ಮುಖವಾಡವನ್ನು ಚೂರು ಮಾಡಿಬಿಟ್ಟವು. ಅದಿಲ್ಲದೆ ಮುಖ ನೋಡಿದೆ. ವಿಕಾರವಾಗಿದೆ. ಕೋಪದಲ್ಲಿ ಕನ್ನಡಿಯನ್ನು ಜೋರಾಗಿ ನೆಲಕ್ಕೆ ಕುಕ್ಕಿದೆ. ಚೂರು ಚೂರಾಯಿತು. ಎಲ್ಲ ಚೂರುಗಳಲ್ಲೂ ನನ್ನ ವಿಕಾರ ಮುಖವೇ ಕಾಣುತ್ತಿತ್ತು. ಕನ್ನಡಿಯನ್ನೂ ಶಪಿಸಿದೆ. ಆದರೆ ಆತ್ಮಸಾಕ್ಷಿ ಜೋರಾಗಿ ಕೂಗಿತು. ತಪ್ಪು ಕನ್ನಡಿಯದಲ್ಲ ಎಂದು.
Pree
Comments
Post a Comment