ಅಲೆಗಳ ಪಿಸುಮಾತು !!
ಅವರಿಬ್ಬರೂ ಒಂದೇ ಊರಿನವರು, ಬಾಲ್ಯ ಸ್ನೇಹಿತರು, ಒಟ್ಟಿಗೆ ಆಡಿ ಬೆಳೆದವರು. ಪಿಯುಸಿ ಓದಲು ಜೊತೆಯಾಗೇ ತಮ್ಮ ಹಳ್ಳಿಯಿಂದ ಬೆಂಗಳೂರಿಗೆ ಬಂದಿದ್ದರು. ಪರೀಕ್ಷೆ ಮುಗಿಸಿ ಊರಿಗೆ ಹೋಗುವ ಮೊದಲು ಇಂದು ತಾನೇ ರಿಲೀಸ್ ಆಗಿದ್ದ ಹೊಸ ಸಿನಿಮಾ ನೋಡುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು.
“ಹೇಗಿತ್ತು ಪರೀಕ್ಷೆ?” ಪರೀಕ್ಷಾ ಕೋಣೆಯಿಂದ ಹೊರಬರುತ್ತ ಪ್ರಹ್ಲಾದ ಕೇಳಿದ.
“ಪಾಸ್ ಆಗ್ತೀನಿ ಬಿಡು. ನಿನಗೆ ೧೦೦ ಮಾರ್ಕ್ಸ್ ಗೆ ಎಕ್ಸಾಮ್ ಇತ್ತೋ ಅಥವಾ ೨೦೦ ಮಾರ್ಕ್ಸ್ ಗೆ ಇತ್ತೋ? ಅದೆಷ್ಟೋ ಬರೀತೀಯ” ಎಂದು ರಾಕೇಶ ರಾಗ ಎಳೆದ. “ಬಾ.. ಫಿಲಂ ನೋಡೋಕಾದ್ರು ಹೋಗಣ.. ಆಗಲೇ ಲೇಟ್ ಆಗೋಯ್ತು” ಅಂತ ಗೋಗರೆದ.
ರಾಕೇಶನಿಗೆ ಫಿಲಂ ನೋಡುವ ಚಿಂತೆಯಾದರೆ ಪ್ರಹ್ಲಾದ ಬೇರೆಯದೇ ಯೋಚನೆಯಲ್ಲಿದ್ದ. ಮಾತು ಕೇಳಿದರೂ ಕೇಳದಂತೆ “ಇರು ಒಂದು ನಿಮಿಷ.. ಈಗ ಬಂದ್ಬಿಡ್ತೀನಿ” ಎಂದು ಮೆಟ್ಟಿಲು ಹತ್ತಿ ಮೊದಲನೇ ಫ್ಲೋರ್ ಕಡೆ ಓಡಿದ. ಅವನು ಕ್ಷಮಾಳನ್ನು ನೋಡಲು ಹೋಗುತ್ತಿದ್ದಾನೆ ಎಂಬುದು ರಾಕೇಶನಿಗೆ ತಿಳಿಯದ ವಿಷಯವೇನಾಗಿರಲಿಲ್ಲ.
ಕ್ಷಮಾ ಪ್ರಹ್ಲಾದನ ಕನಸಿನ ರಾಣಿಯಾಗಿ ಆಗಲೇ ಒಂದು ವರ್ಷವಾಗಿತ್ತು. ಕಾಲೇಜಿನ ಮೊದಲ ದಿನ “ವಿದ್ಯಾ ದೇಗುಲವಿದು.. ಕೈ ಮುಗಿದು ಒಳಗೆ ಬಾ” ಎಂದು ಬರೆದಿದ್ದ ಬೋರ್ಡಿಗೆ ಕಣ್ಣು ಮುಚ್ಚಿ, ಕೈ ಮುಗಿದು ಎದುರಿಗೆ ಕಂಡ ಕ್ಷಮಾಳ ದೇವಿ ಸ್ವರೂಪವನ್ನು ನೋಡಿ ಸ್ಥಂಭಿಭೂತನಾಗಿ ನಿಂತುಬಿಟ್ಟಿದ್ದ.
ತಪ್ಪದೆ ಪ್ರತಿದಿನವೂ ತಾಯಿ ಹೇಳುತ್ತಿದ್ದ ಮಾತು ಪ್ರಹ್ಲಾದನ ಮನದಲ್ಲಿ ನಾಟಿ ‘ಓದಿ, ಒಳ್ಳೆಯ ಮಾರ್ಕ್ಸ್ ತೆಗೆದರೆ ಮಾತ್ರ ದೊಡ್ಡ ಮನುಷ್ಯನಾಗಬಹುದು’ ಎಂಬ ತಪ್ಪುಕಲ್ಪನೆ ಮೂಡಿ ಬಿಟ್ಟಿತ್ತು. ಅದೇ ಭಕ್ತಿ ಭಾವದಿಂದ ಓದಿ ಪ್ರತಿ ವರ್ಷವೂ ಮೊದಲನೇ ರಾಂಕ್ ಗಳಿಸಿದ್ದ. ಡಾಕ್ಟರೋ ಇಂಜಿನಿಯರೋ ಅಥವಾ ಸಿವಿಲ್ ಸರ್ವಿಸ್ ಮಾಡಿ ಡೀಸಿ ಆಗಬೇಕೋ ಎಂಬ ನಿಖರ ಉದ್ದೇಶ ಇನ್ನೂ ಇಲ್ಲದಿದ್ದರೂ ದೊಡ್ಡ ಮನುಷ್ಯನಾಗಬೇಕು ಎಂಬ ನಿಶ್ಚಲ ಮನಸ್ಸು ಹೊತ್ತು, ತಂದೆ ತಾಯಿಯ ಆಶೀರ್ವಾದದೊಂದಿಗೆ ತನ್ನ ಹಳ್ಳಿ ಬಿಟ್ಟು ಬಂದು ಬಿಟ್ಟಿದ್ದ. ಇಂದು ಕೂಡ ಅಷ್ಟೇ ಭಕ್ತಿ ಭಾವದಿಂದ “ವಿದ್ಯಾ ದೇಗುಲವಿದು.. ಕೈ ಮುಗಿದು ಒಳಗೆ ಬಾ” ಎಂದು ಬರೆದಿದ್ದ ಬೋರ್ಡಿಗೆ ಕಣ್ಣು ಮುಚ್ಚಿ ಕೈ ಮುಗಿದು ಕ್ಲಾಸ್ ರೂಮಿನೊಳಗೆ ಕಾಲಿಟ್ಟಿದ್ದ. ಆದರೆ ಆ ದೇವಿ ಸ್ವರೂಪ ನೋಡಿದ ತಕ್ಷಣ, ದೊಡ್ಡ ಮನುಷ್ಯನಾಗುವ ಆಸೆ ಎರಡನೇ ಸ್ಥಾನ ಪಡೆದು.. ಕ್ಷಮಾಳ ಮನದಲ್ಲಿ ಜಾಗ ಕಾದಿರಿಸಿ ಕೊಳ್ಳಬೇಕೆಂಬ ಆಸೆ ಮೊದಲ ಸ್ಥಾನ ಪಡೆದುಬಿಟ್ಟಿತ್ತು.ಅವನು ಕಲ್ಲುಕಂಭದಂತೆ ಎಷ್ಟು ಹೊತ್ತು ನಿಂತಿದ್ದನೋ.. ರಾಕೇಶ ಕೈ ಹಿಡಿದು ಎಳೆದಾಗಲೇ ಅವನು ಮತ್ತೆ ಭೂಲೋಕಕ್ಕೆ ಬಂದಿಳಿದದ್ದು.
ರಾಕೇಶನಿಗೆ ಪ್ರಹ್ಲಾದನಂತೆ ತಾನೊಬ್ಬ ದೊಡ್ಡ ಮನುಷ್ಯನಾಗಬೇಕು ಎಂಬ ಮಹಾದಾಸೆಯೇನೂ ಇರಲಿಲ್ಲ. ಅವನ ತಾಯಿ ಪ್ರಹ್ಲಾದನ ತಾಯಿಯಂತೆ ಯಾವುದೇ ತಪ್ಪು ಕಲ್ಪನೆ ತುಂಬಿರಲಿಲ್ಲವಾದ್ದರಿಂದ ಅವನಿಗೆ ಓದಿನ ಮೇಲೆ ಇದ್ದ ಆಸಕ್ತಿ ಅಷ್ಟಕ್ಕಷ್ಟೇ. ಹಾಗಾಗಿ ಕಣ್ತೆರೆದುಕೊಂಡೆ ಬಂದ ಅವನು ಪ್ರಹ್ಲಾದನ ಕೈ ಹಿಡಿದು ಎಳೆದುಕೊಂಡು ಬಂದು ಬೆಂಚಿನ ಮೇಲೆ ಕೂರಿಸಿದ.
ಬೆಂಚಿನ ಮೇಲೆ ಕುಳಿತ ಮೇಲೂ ಅವಳ ಮೇಲೆ ನೆಟ್ಟಿದ್ದ ನೋಟ ತೆಗೆಯಲಾಗಲಿಲ್ಲ ಪ್ರಹ್ಲಾದನಿಗೆ. ಅವಳ ಕಣ್ಣುಗಳನ್ನು ನೋಡಿ ಸಮ್ಮೋಹನಗೊಂಡು, ಗೂಬೆಯಂತೆ ಕಣ್ಣು ಮಿಟುಕಿಸದೆ ದಿನವಿಡೀ ಅವಳನ್ನೇ ನೋಡುತ್ತಾ ಕುಳಿತುಬಿಟ್ಟಿದ್ದ. ಅವಳ ಮೊಗದಲ್ಲಿದ್ದ ಸೊಬಗಿಗೆ ಮೂಲ ಅವಳ ಕಣ್ಣೆ ಆಗಿದ್ದುವು. ಕಬ್ಬಿಣದ ಪುಡಿಯನ್ನು ನೇರವಾಗಿ ತನ್ನ ಬಳಿಗೆ ಸೆಳೆದುಕೊಳ್ಳುವ ಚುಂಬಕದಂತೆ ಪ್ರಹ್ಲಾದನ ನೋಟವನ್ನು ತನ್ನೆಡೆಗೆ ಸೆಳೆಯುತ್ತಿದ್ದವು ಆ ಕಣ್ಣುಗಳು. ಆ ಕಣ್ಣುಗಳಿಂದಲೇ ಮಾಂತ್ರಿಕ ಶಕ್ತಿಯೊಂದು ಉಕ್ಕಿ ಹರಿದು ಒಂದು ಜೀವವಾಗಿ ರೂಪಗೊಂಡಿದ್ದಳೋ ಎನ್ನುವಂತೆ ಭಾಸವಾಗುತ್ತಿತ್ತು. ಆ ದಿನ ರಾತ್ರಿ ತಮ್ಮ ಹಾಸ್ಟೆಲಿನಲ್ಲಿ ಊಟ ಮುಗಿಸಿ ಮಾತನಾಡುತ್ತಿದ್ದಾಗ ಕುತೂಹಲ ತಡೆಯಲಾಗದೆ, “ ಆ ಡುಮ್ಮಿ ಏನು ಚೆನಾಗಿದ್ದಾಳೆ ಅಂತ ಹಂಗೆ ನೋಡ್ತಾ ಕೂತಿದ್ದೆ?” ಅಂತ ರಾಕೇಶ ಕೇಳಿದಾಗ ಪ್ರಹ್ಲಾದನಿಗೆ ರೇಗಿ ಹೋಗಿತ್ತು.
“ ಅವಳು ಡುಮ್ಮಿನ? ಅದೇನೋ ಅಂತಾರಲ್ಲ.. ಹಾಂ.. ಬೇಬಿ ಫ್ಯಾಟ್. ಅದು ಬೇಬಿ ಫ್ಯಾಟ್ ಕಣೋ.. ನೋಡಿದ್ರೆ ಗಲ್ಲ ಚಿವುಟಬೇಕು ಅನ್ಸುತ್ತಲ್ಲ.. ಅಷ್ಟೇ.. ಅಷ್ಟಕ್ಕೇ ಡುಮ್ಮಿ ಅಂತಿಯಲ್ಲ” ಎಂದು ರೇಗಿದ್ದ. ಅಷ್ಟು ಸುಲಭವಾಗಿ ಪ್ರಹ್ಲಾದನನ್ನು ರೇಗಿಸಬಹುದು ಎಂಬ ರಹಸ್ಯ ತಿಳಿದ ರಾಕೇಶ ಅವಕಾಶ ಸಿಕ್ಕಾಗಲೆಲ್ಲ ಅವನನ್ನು ರೇಗಿಸದೇ ಬಿಡುತ್ತಿರಲಿಲ್ಲ.
ಕ್ಷಮಾಳನ್ನು ಹುಡುಕಿ ಮೊದಲನೇ ಫ್ಲೋರಿಗೆ ಹೋಗಿದ್ದ ಪ್ರಹ್ಲಾದನಿಗೆ ಅಲ್ಲಿ ನಿರಾಸೆ ಕಾದಿತ್ತು. ಇಡೀ ಕೋಣೆಯಲ್ಲಿ ಒಬ್ಬರೂ ಇರಲಿಲ್ಲ. ನಿಧಾನವಾಗಿ ತಿರುಗುತ್ತಿದ್ದ ಫ್ಯಾನ್ ಬಿಟ್ಟರೆ ಎಲ್ಲವೂ ನಿಸ್ತೇಜವಾಗಿದ್ದವು. ಅದನ್ನು ನೋಡಿದ ಪ್ರಹ್ಲಾದನ ಮುಖವೂ ನಿಸ್ತೇಜಗೊಂಡಿತು. ಮತ್ತೆ ಕ್ಷಮಾಳನ್ನು ನೋಡಲು ಒಂದು ತಿಂಗಳಾಗುವುದೋ, ಎರಡು ತಿಂಗಳಾಗುವುದೋ ತಿಳಿಯದು. ಕೊನೆಗೊಮ್ಮೆ ಕಣ್ಣು ತುಂಬಾ ನೋಡಿ ಮನಸ್ಸಿನಲ್ಲಿ ಅವಳನ್ನು ತುಂಬಿಕೊಂಡರೆ, ರಜಾ ದಿನಗಳನ್ನು ಹೇಗೋ ಕಳೆಯಬಹುದು ಎಂಬ ಆಸೆ ಹೊತ್ತು ಬಂದಿದ್ದ ಅವನು. ಒಂದು ಕಾಲದಲ್ಲಿ, 5 ನಿಮಿಷ ದೂರವಿದ್ದ ತಕ್ಷಣ ವಿರಹದಿಂದ ಒದ್ದಾಡುವ ಪ್ರೇಮಿಗಳನ್ನು ಸಿನೆಮಾದಲ್ಲಿ ನೋಡಿ ಅಪಹಾಸ್ಯ ಮಾಡುತ್ತಿದ್ದವನು, ಇಂದು ಅದೇ ವಿರಹದ ಭಾವಕ್ಕೆ ಸೋತಿದ್ದ. ಮೂರು ತಾಸಿಗೆ ಮುಂಚೆಯಷ್ಟೇ ಜೀನ್ಸ್ ಮತ್ತು ಬಿಳಿ ಬಣ್ಣದ ಟಾಪ್ ಹಾಕಿಕೊಂಡು, ಎಂದಿನಂತೆ ಕೈಯಲ್ಲೊಂದು ಬಿಳಿ ಬಣ್ಣದ ಕರ್ಚಿಫ್ ಹಿಡಿದು ನಡೆದು ಬಂದಿದ್ದನ್ನು ನೋಡಿದ್ದರೂ ಮತ್ತೊಮ್ಮೆ ಕಾಣಸಿಗಲಿಲ್ಲವೆಂದು ಇಷ್ಟೊಂದು ಬೇಸರವಾಗುತ್ತಿರುವುದು ಅವನಿಗೆ ಆಶ್ಚರ್ಯಕರವಾಗಿತ್ತು . ಇಷ್ಟು ಬೇಗ ಮಿಸ್ ಮಾಡಿಕೊಳ್ಳುತ್ತಾನೆ ಎಂದು ಅವನಿಗೆ ತಿಳಿದಿರಲಿಲ್ಲ. ನೋಡಲಂತೂ ಸಿಗಲಿಲ್ಲ, ಕೊನೆಯ ಪಕ್ಷ ಅವಳು ಕುಳಿತಿದ್ದ ಬೆಂಚಿನ ಮೇಲೆ ಒಂದು ಕ್ಷಣ ಕುಳಿತು, ಅವಳ ಮುಖಚರ್ಯೆಯನ್ನು ಮನದಲ್ಲಿ ಮೂಡಿಸಿ ಕೊಳ್ಳಬೇಕೆನಿಸಿತು. ಒಂದು ವರ್ಷದಲ್ಲಿ ಒಂದು ದಿನವೂ ಅವಳೊಂದಿಗೆ ಮಾತನಾಡಿರದಿದ್ದರೂ ಈ ಸೆಳೆತ ಇಷ್ಟು ಬೃಹದಾಕಾರವಾಗಿ ಬೆಳೆದದ್ದು ಹೇಗೆ? ಎಂದು ಪ್ರತಿ ದಿನವೂ ತನ್ನನ್ನೇ ತಾನು ಪ್ರಶ್ನಿಸಿಕೊಂಡಿದ್ದ. ಉತ್ತರ ಮಾತ್ರ ದೊರಕದೆ ಹೋಗಿತ್ತು. ಬೆಂಚಿನ ಮೇಲೆ ಕುಳಿತ ಪ್ರಹ್ಲಾದನ ಊಹೆಯಲ್ಲಿ ಅವಳು ಅವನ ಪಕ್ಕದಲ್ಲೇ ಕುಳಿತಂತಿತ್ತು.
“ನೀನಾದರೂ ಉತ್ತರ ಹೇಳ್ತೀಯಾ?” ಎಂದು ಜೋರಾಗಿಯೇ ಕೇಳಿದ. ಎಂದೂ ಮಾತನಾಡದವಳು ಇಂದು ಮಾತನಾಡುವಳೇ? ಅವಳು ಸುಮ್ಮನೆ ನಕ್ಕಳು. ನಗುವನ್ನು ಕಂಡ ಪ್ರಹ್ಲಾದನಿಗೆ ತನ್ನ ಊಹಾ-ಸಖಿಯ ಮೇಲಿನ ಪ್ರೀತಿ ಆ ಕ್ಷಣದಲ್ಲಿ ದುಪ್ಪಟ್ಟಾಯಿತು.
ಕಾದು ಕಾದು ಬೇಸರಗೊಂಡು ಪ್ರಹ್ಲಾದನನ್ನು ಹುಡುಕಿ ಬಂದಿದ್ದ ರಾಕೇಶನಿಗೆ, ಅವನು ಒಬ್ಬನೇ ಕುಳಿತು ಮಾತನಾಡುತ್ತಿರುವುದು ಕಂಡು ನಗು ಬಂದಿತು. ಇಂತಹ ದೃಶ್ಯ ತೀರಾ ಹೊಸದೇನು ಆಗಿರದಿದ್ದರೂ.. ದಿನ ಕಳೆದಂತೆ ಪ್ರಹ್ಲಾದನ ಹುಚ್ಚಾಟ ಕ್ರಮೇಣ ಜಾಸ್ತಿಯಾಗುತ್ತಿದ್ದುದು ರಾಕೇಶನಿಗೆ ಬಹಳ ಸ್ವಾರಸ್ಯಕರ ಸಂಗತಿಯಾಗಿತ್ತು. ಸಿಕ್ಕ ಅವಕಾಶವನ್ನು ಬಿಡದೆ “ಅಯ್ಯೋ.. ನಮ್ಮ ಹುಡುಗನಿಗೆ ಪೂರ್ತಿ ಹುಚ್ಚು ಹಿಡಿತಪ್ಪೋ” ಎಂದು ನಾಟಕೀಯವಾಗಿ ಗೋಳಾಡಿದನು. ರಾಕೇಶನ ಎದುರಿಗೆ ಹೀಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಕೊಂಡಿದ್ದರಿಂದ, ನಾಚಿಕೆಯಿಂದ ಪ್ರಹ್ಲಾದನ ಮುಖ ಕೆಂಪಾಯಿತು. ಫಿಲಂ ನೋಡಲು ತಡವಾಗುತ್ತಿರುವುದನ್ನು ನೆನೆಸಿಕೊಂಡು “ನೀನು ಕನಸು ಕಂಡಿದ್ದು ಸಾಕು. ಫಿಲ್ಮ್ ನೋಡೋಕೆ ಹೋಗಣ ಬಾ” ಎಂದು ಕರೆದ. ಕ್ಷಮಾ ಅಂತೂ ಕಾಣಿಸಲಿಲ್ಲ.. ಫಿಲಂ ಆದ್ರೂ ನೋಡೋಣ ಎಂದು ಎದ್ದು ಹೊರಟಾಗ ಬೆಂಚಿನ ಕೆಳಗೆ ಬಿಳಿಯದೊಂದು ಕರ್ಚಿಫ್ ಒಂದು ಕಾಣಿಸಿತು. ರಾಕೆಶನಿಗೆ ತಿಳಿದರೆ ಮತ್ತೆ ತಮಾಷೆ ಮಾಡುತ್ತಾನೆಂದು ಅವನಿಗೆ ತಿಳಿಯದಂತೆ ಅದನ್ನು ತನ್ನ ಜೇಬಿನೊಳಗೆ ಇಳಿಸಿ ಹೊರನಡೆದನು.
ರಜೆ ಶುರುವಾಗಿ ಒಂದು ವಾರ ಕಳೆದೆ ಹೋಗಿತ್ತು. ಅಮ್ಮನ ಕುಶಲೋಪರಿಯ ವಿಚಾರಣೆಗಳಿಗೆ, ಅಪ್ಪನ ಅನುಮಾನದ ನೋಟಗಳಿಗೆ ಹಾಗೂ ತಮ್ಮನ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುವುದರಲ್ಲೇ ಸಮಯ ಕಳೆದುಹೋಗಿತ್ತು. ಬೆಳಗ್ಗೆ ತಡವಾಗಿ ಎದ್ದು ತಿಂಡಿ ತಿಂದು, ಹಳೆಯ ಗೆಳೆಯರೊಂದಿಗೆ ಊರೆಲ್ಲ ತಿರುಗಲು ಹೋದರೆ ಮತ್ತೆ ಮನೆಗೆ ಹಿಂತಿರುಗುವುದು ಮಧ್ಯಾಹ್ನ ಊಟದ ಸಮಯಕ್ಕೆ. ಊರಿನ ಪೋಸ್ಟ್ ಆಫಿಸಿನಲ್ಲಿ ಪೋಸ್ಟ್ ಮಾಸ್ಟರ್, ಪೋಸ್ಟ್ ಮ್ಯಾನ್, ಕ್ಲರ್ಕ್ ಮತ್ತು ಇನ್ನಿತರ ಅವತಾರವನ್ನು ಹೊತ್ತು ಏಕಪಾತ್ರಾಭಿನಯ ಮಾಡುತ್ತಿದ್ದ ತಂದೆಯು ಊಟಕ್ಕೆಂದು ಮನೆಗೆ ಬಂದಿರುತ್ತಿದ್ದರು. ಎಲ್ಲರು ಕುಳಿತು ಊಟ ಮಾಡಿ, ಒಂದಷ್ಟು ಹೊತ್ತು ಟಿವಿ ನೋಡಿಯೋ ಅಥವಾ ಯಾವುದಾದರೊಂದು ಪುಸ್ತಕ ಓದಿಯೋ ಸಮಯ ಕಳೆಯುತ್ತಿದ್ದ. ಸಂಜೆಯಾಗುತ್ತಿದ್ದಂತೆ ಆಂಜನೇಯ ದೇವಸ್ಥಾನದ ಹಿಂದಿರುವ ಮೈದಾನದಲ್ಲಿ ಊರಿನ ಹುಡುಗರೆಲ್ಲ ಕ್ರಿಕೆಟ್ ಆಡಲು ಸೇರುತ್ತಿದ್ದರು. ಕತ್ತಲಾಗುವವರೆಗೂ ಆಟವಾಡಿ ಮನೆಗೆ ಬಂದು ಊಟ ಮಾಡಿ ಮಲಗುವುದು ಪ್ರಹ್ಲಾದನ ದಿನಚರಿಯಾಗಿತ್ತು. ರಾಕೇಶ ಊರಿಗೆ ಬಂದ ಮರುದಿನವೇ ತನ್ನ ಅಜ್ಜಿಯ ಊರಿಗೆ ಹೋಗಿ ಕುಳಿತು ಬಿಟ್ಟಿದ್ದ. ಅವನೂ ಜೊತೆಯಲ್ಲಿ ಇಲ್ಲದಿದ್ದುದರಿಂದ ಬೆಂಗಳೂರು, ಕಾಲೇಜು, ಮುಂಬರುವ CET ಪರೀಕ್ಷೆ ಎಲ್ಲವನ್ನೂ ಮರೆತು, ತನ್ನ ಬಾಲ್ಯದ ದಿನಗಳಂತೆ ರಜೆಯ ಆನಂದವನ್ನು ಸವಿಯುತ್ತಿದ್ದ.
ಅಮ್ಮನೋ.. ಬೇಡವೆಂದರೂ ಎಲ್ಲ ಬಟ್ಟೆಗಳನ್ನು ತೊಳೆಯುವ ಕಾಂಟ್ರಾಕ್ಟ್ ತೆಗೆದುಕೊಂಡು ಬಿಟ್ಟಿದ್ದಳು. ತೊಳೆದಿರುವ ಬಟ್ಟೆಯಾದರೂ ಸರಿ. “ನಿನಗೆಲ್ಲಿ ಸರಿಯಾಗಿ ತೊಳೆಯಲು ಬರುತ್ತೆ?” ಎಂದು ಬಯ್ದು ರಾಶಿಗಟ್ಟಲೆ ಬಟ್ಟೆಗಳನ್ನು ವಾರವಿಡೀ ತೊಳೆದು ಒಣಗಿಸಿದ್ದಳು. “ಇನ್ನು ಯಾವದಾದ್ರು ಉಳಿದುಬಿಟ್ಟಿದ್ರೆ ಕೊಡು, ಅದನ್ನು ತೊಳೆದು ಮುಗಿಸಿ ಬಿಡ್ತೀನಿ” ಎಂದು ಅಮ್ಮ ಹೇಳಿದಾಗ ಪ್ರಹ್ಲಾದ ತನ್ನ ಕೋಣೆಗೆ ಹೋಗಿ ನೋಡಿದನು. ಬೆಂಗಳೂರಿನಿಂದ ಹಾಕಿಕೊಂಡು ಬಂದ ಬಟ್ಟೆ ಹಾಗೆಯೆ ಇದ್ದದ್ದು ಕಾಣಿಸಿತು. ಆಗಲೇ ನೆನಪಾಗಿದ್ದು ಅವನಿಗೆ ಅಂದು ಸಿಕ್ಕಿದ್ದ ಕ್ಷಮಾಳ ಕರ್ಚಿಫ್ ಜೇಬಿನಲ್ಲಿಯೇ ಇದೆಯೆಂದು.
ಅಂದು ತಡರಾತ್ರಿಯವರೆಗೂ ಟೆಟ್ರಿಸ್ ವಿಡಿಯೋ ಗೇಮ್ ಆಡುತ್ತಿದ್ದ ಪ್ರಹ್ಲಾದನ ತಮ್ಮ ತನ್ನ ಆಟ ಮುಗಿಸಿ ಮಲಗಿದ ಮೇಲೆ, ನಿಧಾನವಾಗಿ ಆ ಬಿಳಿಯ ಕರ್ಚಿಫನ್ನು ತೆಗೆದು ನೋಡಿದ. ಹಿಂದೊಮ್ಮೆ ಕ್ಷಮಾಳ ಕರ್ಚಿಫ್ ಪ್ರಹ್ಲಾದನ ಕೈಗೆ ಸಿಕ್ಕಿದ್ದರೂ ಇಷ್ಟು ಸೂಕ್ಷ್ಮವಾಗಿ ಅದನ್ನು ಗಮನಿಸಲು ಆಗಿರಲಿಲ್ಲ. ಮೆತ್ತಗಿನ ಆ ಕರ್ಚಿಫಿನ ಒಂದು ಮೂಲೆಯಲ್ಲಿ ಕೆಂಪು ಬಣ್ಣದಲ್ಲಿ “ಕ್ಷಮಾ” ಎಂದು ಎಂಬ್ರಾಯ್ಡರಿ ಮಾಡಲಾಗಿತ್ತು. ಕರ್ಚಿಫಿನಿಂದ ಒಂದು ಆಹ್ಲಾದಕರ ಪರಿಮಳ ಸೂಸುತ್ತಿತ್ತು. ಯಾವುದೋ ಹೂವಿನ ಪರಿಮಳ.. ಆದರೆ ಯಾವ ಹೂವು ಎಂದು ಎಷ್ಟು ಯೋಚಿಸಿದರೂ ಪ್ರಹ್ಲಾದನಿಗೆ ಯಾವ ಹೂವೆಂದು ತಿಳಿಯಲಿಲ್ಲ.
ಹಿಂದೊಮ್ಮೆ, ಕಳೆದ ವರ್ಷದ ನವೆಂಬರಿನಲ್ಲಿ ನಡೆದ ಸಾಂಕೃತಿಕ ಕೂಟದಲ್ಲಿ ಕ್ಷಮಾ ಭರತನಾಟ್ಯದ ಪ್ರದರ್ಶನ ಕೊಟ್ಟಿದ್ದಳು. ಆಗ ಅವಳು ಪೊಲೀಸ್ ಕಮಿಷನರ್ ಮಗಳು ಎಂದು ಇನ್ನೂ ಗೊತ್ತಿರಲಿಲ್ಲ. ಅವಳ ನಾಟ್ಯ ನೋಡಿ ಆ ಲಾವಣ್ಯಕ್ಕೆ ಮನಸೋತು ಅವಳನ್ನು ಮಾತನಾಡಿಸಲೇಬೇಕು ಎಂದೆನ್ನಿಸಿತು. ಸೇರಿದ್ದ ಜನಜಂಗುಳಿಯ ಮಧ್ಯ ಅವಳನ್ನು ಹುಡುಕಿ ಹೊರಟಾಗ ಕಾಲೇಜಿನ ಕಾರಿಡಾರಿನಲ್ಲಿ ನಿಂತು ತನ್ನ ಗೆಳತಿಯರೊಂದಿಗೆ ಮಾತನಾಡುತ್ತಿರುವುದು ಕಾಣಿಸಿತು. ಅವಳು ಒಬ್ಬಳೇ ಸಿಗುತ್ತಾಳೇನೋ ಎಂದು ಬಹಳ ಹೊತ್ತು ಕಾದನು. ಆದರೆ ಅವರ ಮಾತೆ ಮುಗಿಯುವಂತೆ ಕಾಣಲಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಒಂದು ಬಿಳಿಯ ಕರ್ಚಿಫ್ ಅಲ್ಲಿಯೇ ಬಿದ್ದಿದ್ದು ಕಾಣಿಸಿತು. ಮಾತನಾಡಿಸಲು ಒಂದು ನೆಪ ಸಿಕ್ಕಿತೆಂದು ಖುಷಿಯಾಗಿ, “ಕ್ಷಮಾ,ನಿನ್ನ ಕರ್ಚಿಫ್ ಬಿದ್ದಿದೆ” ಎಂದು ತೆಗೆದು ಕೊಟ್ಟ. ಅವಳು ನಸುನಕ್ಕು “ಥ್ಯಾಂಕ್ಸ್” ಅಂದಳು. ಅವಳ ನಗು ನೋಡಿ, ಹೇಗೋ ಧೈರ್ಯ ತುಂಬಿಕೊಂಡು “ಹಾಯ್ ಕ್ಷಮಾ.. ನಾನು ಪ್ರಹ್ಲಾದ್. ನಿನ್ನ ಡ್ಯಾನ್ಸ್ ತುಂಬ – “ ಎನ್ನುವಷ್ಟರಲ್ಲಿ ಅವಳು ಮುಖ ತಿರುಗಿಸಿ ಮತ್ತೆ ಗೆಳೆತಿಯರೊಂದಿಗೆ ಮಾತನಾಡಲು ಶುರುಮಾಡಿದಳು. ಪ್ರಹ್ಲಾದ ಮಾತನಾಡಿಸಲು ಪ್ರಯತ್ನ ಪಡುತ್ತಿದ್ದಾನೆ ಎಂಬುದನ್ನು ಗಮನಿಸದೆ ಅವನನ್ನು ಪೂರ್ತಿಯಾಗಿ ನಿರ್ಲಕ್ಷಿಸಿಬಿಟ್ಟಿದ್ದಳು. ಪಕ್ಕದಲ್ಲಿದ್ದ ರಾಕೇಶ ಜೋರಾಗಿ ನಕ್ಕು ಬಿಟ್ಟಿದ್ದ.
ಒಂದೇ ದಿನದಲ್ಲಿ ವಿಷಯ ಕಾಲೇಜಿನಲ್ಲೆಲ್ಲ ಹರಡಿ ಬಿಟ್ಟಿತ್ತು. ಎಲ್ಲರೂ ಪ್ರಹ್ಲಾದನ ಬೆನ್ನ ಹಿಂದೆ ನಗುವವರೆ. ಮರುದಿನ ಮಧ್ಯಾಹ್ನ ಊಟ ಮಾಡುತ್ತಿರುವಾಗ ಅವನ ಮತ್ತೊಬ್ಬ ಕ್ಲಾಸ್ ಮೇಟ್ ಪ್ರವೀಣ “ಅವಳ ಹತ್ರ ಮತ್ತೆ ಮಾತನಾಡೋಕೆ ಹೋಗಬೇಡ.ಅವರಪ್ಪ ಪೊಲೀಸ್ ಕಮಿಷನರ್. ಹುಷಾರು!” ಎಂದು ಹೆದರಿಸಿದ ಮೇಲಂತೂ ಅವಳನ್ನು ಮರೆತೇ ಬಿಡಬೇಕು ಎಂದೆನಿಸಿ ಬಿಟ್ಟಿತ್ತು. ಪಕ್ಕದಲ್ಲೇ ಇದ್ದ ರಾಕೇಶ “ಅಯ್ಯೋ, ನಮ್ ಹುಡುಗ ಎನ್ಕೌಂಟರ್ನಲ್ಲಿ ಹೋಗಿಬಿಡ್ತನಲ್ಲಪ್ಪೋ” ಎಂದು ತನ್ನದೇ ಆದ ನಾಟಕೀಯ ರೀತಿಯಲ್ಲಿ ಗೋಳಾಡಿದ್ದ. ತನಗಾದ ಹೆದರಿಕೆ ತೋರಿಸಿಕೊಳ್ಳಬಾರದೆಂದು “ಆದ ಅವಮಾನಕ್ಕೆ ಇನ್ನು ಮುಂದೆ ಅವಳನ್ನು ಮರೆತು ಬಿಡುತ್ತೇನೆ. ಕನಿಷ್ಠ ಪಕ್ಷ ಥಾಂಕ್ಸ್ ಹೇಳದಿದ್ರು ಪರವಾಗಿಲ್ಲ. ನನ್ನ ಮಾತನ್ನೂ ಕೇಳುವಷ್ಟು ಸಂಸ್ಕಾರವಿಲ್ಲ” ಎಂದು ಗೆಳೆಯರೊಂದಿಗೆ ಹೇಳಿಕೊಂಡು 2 ವಾರ ಓಡಾಡಿದ. ಆದರೆ ಕಾಲೇಜು ಹುಡುಗರ ಮನಸ್ಸಿನಿಂದ ಆ ಸನ್ನಿವೇಶ ಕ್ರಮೇಣ ಮರೆತುಹೋದಂತೆ ಪ್ರಹ್ಲಾದನಿಗೂ ವಿಷಯ ಮರೆತು ಮೊದಲಿನ ಆಕರ್ಷಣೆ ಪುನರಾವರಿಸಿಕೊಂಡಿತು. ಹೀಗೆ ಹಳೆಯ ನೆನಪುಗಳ ನಡುವೆ ಆ ಕರ್ಚಿಫನ್ನು ತನ್ನೆದೆಗೆ ಒತ್ತಿಕೊಂಡು ಯಾವಾಗ ಮಲಗಿದನೋ ಗೊತ್ತಾಗಲಿಲ್ಲ. ಮಧ್ಯ ರಾತ್ರಿಯಲ್ಲಿ ಕನಸೊಂದು ಕಂಡು ಬೆವರಿ ಎದ್ದು ಕುಳಿತಿದ್ದ.
ಒಂದು ವಿಶಾಲವಾದ ಮರುಭೂಮಿ, ಅತಿಶೂನ್ಯದ ಸ್ತಬ್ದತೆ. ಯಾವುದೇ ಶಬ್ದ ಕೇಳಿಸುತ್ತಿಲ್ಲ. ಗಾಳಿಯ ಇರವೇ ತಿಳಿಯದಂತಾಗಿತೆ. ಒಂದು ಮರಳು ಕಣವೂ ಆಚೀಚೆ ಅಲುಗಾಡದು. ಪ್ರಹ್ಲಾದನಿಗೆ ಕೊಂಚ ದಿಗಿಲಾಯಿತು. ನೋಟ ಹರಿದಷ್ಟು ದೂರವೂ ಮರಳ ರಾಶಿಯೇ ತುಂಬಿದೆ, ದಿಕ್ಕೇ ತೋಚುತ್ತಿಲ್ಲ. ಕುಳಿತಲ್ಲೇ ತಿರುಗಿ ನೋಡಿದರೆ ಒಂದು ಮನೆ ಕಾಣಿಸಿತು. ಮನೆ ಅನ್ನುವುದರ ಬದಲು ಬಂಗಲೆ ಎನ್ನಬಹುದು, ಅಷ್ಟು ದೊಡ್ಡದಾಗಿತ್ತು. ತಿಳಿನೀಲಿ ಬಣ್ಣದ ಕಂಪೌಂಡಿನ ಒಳಗೆ ಬೃಹದಾಕಾರದಲ್ಲಿ ನಿಂತಿತ್ತು. ಸುತ್ತಲೂ ಹಿಂದೆಂದೂ ನೋಡಿರದಿದ್ದ ಹೂವಿನ ಗಿಡಗಳ ಸಣ್ಣ ಗಾರ್ಡನ್. ಕ್ಷಮಾಳ ಕರ್ಚಿಫ್ನಲ್ಲಿದ್ದ ಪರಿಮಳವೇ ಈ ಹೂಗಳಲ್ಲಿಯೂ ಇತ್ತು.
ಒಂದೇ ದಿನದಲ್ಲಿ ವಿಷಯ ಕಾಲೇಜಿನಲ್ಲೆಲ್ಲ ಹರಡಿ ಬಿಟ್ಟಿತ್ತು. ಎಲ್ಲರೂ ಪ್ರಹ್ಲಾದನ ಬೆನ್ನ ಹಿಂದೆ ನಗುವವರೆ. ಮರುದಿನ ಮಧ್ಯಾಹ್ನ ಊಟ ಮಾಡುತ್ತಿರುವಾಗ ಅವನ ಮತ್ತೊಬ್ಬ ಕ್ಲಾಸ್ ಮೇಟ್ ಪ್ರವೀಣ “ಅವಳ ಹತ್ರ ಮತ್ತೆ ಮಾತನಾಡೋಕೆ ಹೋಗಬೇಡ.ಅವರಪ್ಪ ಪೊಲೀಸ್ ಕಮಿಷನರ್. ಹುಷಾರು!” ಎಂದು ಹೆದರಿಸಿದ ಮೇಲಂತೂ ಅವಳನ್ನು ಮರೆತೇ ಬಿಡಬೇಕು ಎಂದೆನಿಸಿ ಬಿಟ್ಟಿತ್ತು. ಪಕ್ಕದಲ್ಲೇ ಇದ್ದ ರಾಕೇಶ “ಅಯ್ಯೋ, ನಮ್ ಹುಡುಗ ಎನ್ಕೌಂಟರ್ನಲ್ಲಿ ಹೋಗಿಬಿಡ್ತನಲ್ಲಪ್ಪೋ” ಎಂದು ತನ್ನದೇ ಆದ ನಾಟಕೀಯ ರೀತಿಯಲ್ಲಿ ಗೋಳಾಡಿದ್ದ. ತನಗಾದ ಹೆದರಿಕೆ ತೋರಿಸಿಕೊಳ್ಳಬಾರದೆಂದು “ಆದ ಅವಮಾನಕ್ಕೆ ಇನ್ನು ಮುಂದೆ ಅವಳನ್ನು ಮರೆತು ಬಿಡುತ್ತೇನೆ. ಕನಿಷ್ಠ ಪಕ್ಷ ಥಾಂಕ್ಸ್ ಹೇಳದಿದ್ರು ಪರವಾಗಿಲ್ಲ. ನನ್ನ ಮಾತನ್ನೂ ಕೇಳುವಷ್ಟು ಸಂಸ್ಕಾರವಿಲ್ಲ” ಎಂದು ಗೆಳೆಯರೊಂದಿಗೆ ಹೇಳಿಕೊಂಡು 2 ವಾರ ಓಡಾಡಿದ. ಆದರೆ ಕಾಲೇಜು ಹುಡುಗರ ಮನಸ್ಸಿನಿಂದ ಆ ಸನ್ನಿವೇಶ ಕ್ರಮೇಣ ಮರೆತುಹೋದಂತೆ ಪ್ರಹ್ಲಾದನಿಗೂ ವಿಷಯ ಮರೆತು ಮೊದಲಿನ ಆಕರ್ಷಣೆ ಪುನರಾವರಿಸಿಕೊಂಡಿತು. ಹೀಗೆ ಹಳೆಯ ನೆನಪುಗಳ ನಡುವೆ ಆ ಕರ್ಚಿಫನ್ನು ತನ್ನೆದೆಗೆ ಒತ್ತಿಕೊಂಡು ಯಾವಾಗ ಮಲಗಿದನೋ ಗೊತ್ತಾಗಲಿಲ್ಲ. ಮಧ್ಯ ರಾತ್ರಿಯಲ್ಲಿ ಕನಸೊಂದು ಕಂಡು ಬೆವರಿ ಎದ್ದು ಕುಳಿತಿದ್ದ.
ಒಂದು ವಿಶಾಲವಾದ ಮರುಭೂಮಿ, ಅತಿಶೂನ್ಯದ ಸ್ತಬ್ದತೆ. ಯಾವುದೇ ಶಬ್ದ ಕೇಳಿಸುತ್ತಿಲ್ಲ. ಗಾಳಿಯ ಇರವೇ ತಿಳಿಯದಂತಾಗಿತೆ. ಒಂದು ಮರಳು ಕಣವೂ ಆಚೀಚೆ ಅಲುಗಾಡದು. ಪ್ರಹ್ಲಾದನಿಗೆ ಕೊಂಚ ದಿಗಿಲಾಯಿತು. ನೋಟ ಹರಿದಷ್ಟು ದೂರವೂ ಮರಳ ರಾಶಿಯೇ ತುಂಬಿದೆ, ದಿಕ್ಕೇ ತೋಚುತ್ತಿಲ್ಲ. ಕುಳಿತಲ್ಲೇ ತಿರುಗಿ ನೋಡಿದರೆ ಒಂದು ಮನೆ ಕಾಣಿಸಿತು. ಮನೆ ಅನ್ನುವುದರ ಬದಲು ಬಂಗಲೆ ಎನ್ನಬಹುದು, ಅಷ್ಟು ದೊಡ್ಡದಾಗಿತ್ತು. ತಿಳಿನೀಲಿ ಬಣ್ಣದ ಕಂಪೌಂಡಿನ ಒಳಗೆ ಬೃಹದಾಕಾರದಲ್ಲಿ ನಿಂತಿತ್ತು. ಸುತ್ತಲೂ ಹಿಂದೆಂದೂ ನೋಡಿರದಿದ್ದ ಹೂವಿನ ಗಿಡಗಳ ಸಣ್ಣ ಗಾರ್ಡನ್. ಕ್ಷಮಾಳ ಕರ್ಚಿಫ್ನಲ್ಲಿದ್ದ ಪರಿಮಳವೇ ಈ ಹೂಗಳಲ್ಲಿಯೂ ಇತ್ತು.
ಪ್ರಹ್ಲಾದ ಬಂಗಲೆಯ ಪ್ರವೇಶ ದ್ವಾರದ ಕಡೆ ನಡೆದು ಬಾಗಿಲು ಬಡಿದ. ಆ ನಿಶ್ಯಬ್ಧದ ಮಧ್ಯ ಅವನು ಬಾಗಿಲು ಬಡಿದ ಶಬ್ದ ಜೋರಾಗಿ ಮೊಳಗಿತು, ಆ ಮರುಭೂಮಿಯ ಅಂಚಿನಲ್ಲಿ ಯಾರಾದರೂ ಇದ್ದರೆ ಅವರಿಗೂ ಕೇಳಿಸುವಂತೆ. ಒಳಗೆ ಯಾರದೋ ಹೆಜ್ಜೆಗಳ ಶಬ್ದ. 5 ನಿಮಿಷದ ನಂತರ ನಿಧಾನವಾಗಿ ಬಾಗಿಲು ತೆರೆಯಿತು. ಹಿಂದೆಯೇ ಸಮುದ್ರದ ಅಲೆಗಳ ಸಪ್ಪಳ ಒಳಗಿನಿಂದ ತೇಲಿ ಬಂದಿತು. ಅಲೆಗಳು ತೀರದ ಬಂಡೆಗಳಿಗೆ ಅಪ್ಪಳಿಸುವ ಘೋರ ಶಬ್ದವಲ್ಲ. ಸಂಜೆಯ ತಂಗಾಳಿಯೊಡನೆ ಅಲೆಗಳು ಪಿಸುಗುಡುತ್ತಿರುವಂತೆ.. ತಂಗಾಳಿ ಮಾಡಿದ ಹಾಸ್ಯಕ್ಕೆ ಅಲೆಗಳು ಮುಸುನಗುತ್ತಿರುವಂತೆ.. ಮುಗ್ಧ ಬಾಲೆಯೊಬ್ಬಳು ತನ್ನೊಳಗೆ ಆಡುತ್ತಿರುವ ಮಾತುಗಳನ್ನು ಕದ್ದಾಲಿಸಿದರೆ ಕೇಳುವಂತಹ ತಿಳಿಶಬ್ದ. ಮೊದಲಿದ್ದ ದಿಗಿಲು ಕರಗಿ ಒಂದು ತಿಳಿಯದ ಪ್ರಫುಲ್ಲತೆಯು ಪ್ರಹ್ಲಾದನ ಮನಸ್ಸನ್ನು ಆವರಿಸಿತು.
ತೆರೆದ ಬಾಗಿಲಿನ ಹಿಂದಿನಿಂದ ಪ್ರಹ್ಲಾದನಿಗೆ ಕಾಣಿಸಿದ್ದು ಕ್ಷಮಾಳ ಮುಖ. ತನ್ನನ್ನು ತಾನು ಭರತ ನಾಟ್ಯದ ಉಡುಪಿನಲ್ಲಿ ಸಿಂಗರಿಸಿ ಕೊಂಡಿದ್ದಳು. ಹಸಿರು ಬಣ್ಣದ ಸೀರೆಗೆ ಬಂಗಾರ ಬಣ್ಣದ ಅಂಚು. ಮೂಗುತಿ, ಕೊರಳಲ್ಲಿನ ಸರ ಹಾಗು ತುರುಬಿಗೆ ಮುಡಿದ ಹೂವಿನ ಮಾಲೆ. ಬೆರಳುಗಳಂಚಿಗೆ ಹಚ್ಚಿದ ಕೆಂಪು, ಕಣ್ಣಿಗೆ ಹಚ್ಚಿದ ಕಾಡಿಗೆ.. ಎಲ್ಲವನ್ನು ವಿವರವಾಗಿ ನೋಡುತ್ತಿದ್ದ ಪ್ರಹ್ಲಾದ. ಆದರೆ ಇವನನ್ನು ನೋಡಿದ ಕ್ಷಮಾ ಮಾತ್ರ ದಿಗಿಲುಗೊಂಡಂತಿತ್ತು.. ಆಹ್ವಾನವಿರದ ಅತಿಥಿಯನ್ನು ನೋಡಿದಂತೆ ಅವಳ ಮುಖಭಾವ. ತಕ್ಷಣ ಪ್ರಹ್ಲಾದನ ಮುಖದ ಮೇಲೆಯೇ ಹಾಕಿದ ಬಾಗಿಲ ಶಬ್ದ ಎಷ್ಟು ಜೋರಾಗಿತ್ತೆಂದರೆ ಪ್ರಹ್ಲಾದನಿಗೆ ಎಚ್ಚರವಾಗಿ ಹೋಯಿತು. ಎದ್ದು ಹಾಸಿಗೆಯ ಮೇಲೆ ಕುಳಿತಿದ್ದ. ಮೈಯೆಲ್ಲ ಬೆವರಿತ್ತು. ಕಂಡದ್ದು ಕನಸೋ ನನಸೋ ಎಂದು ತಿಳಿಯಲು ಕೆಲವು ನಿಮಿಷಗಳೇ ಹಿಡಿಯಿತು. ಅವಳ ರೂಪ ಇನ್ನೂ ಕಣ್ಣಿಗೆ ಕಟ್ಟಿದಂತೆ ಇತ್ತು.
ಮತ್ತೆ ಅದೇ ಕನಸು ಬೀಳಲು ಹಲವು ದಿನಗಳೇ ಹಿಡಿಯಿತು. ಆದರೆ ಮತ್ತೊಮ್ಮೆ ಬಿದ್ದ ಕನಸು ಅವನಿಗೆ ಸಂತೋಷ ತುಂದುಕೊಟ್ಟಿದ್ದಂತೂ ನಿಜ.ಎರಡನೇ ಬಾರಿಯೂ ಅದೇ ಮರುಭೂಮಿ, ಅದೇ ಸ್ತಬ್ದತೆ. ಹಿಂತಿರುಗಿ ನೋಡಿದರೆ ಅದೇ ಬಂಗಲೆ. ಹಿಂದಿನ ಸಲದಂತೆ ಈ ಸಲವೂ ಪ್ರಹ್ಲಾದ ಹೋಗಿ ಮನೆಯ ಬಾಗಿಲು ಬಡಿದ. ಕೆಲವು ಕ್ಷಣಗಳ ನಂತರ ಕ್ಷಮಾ ಬಾಗಿಲು ತೆರೆದಳು.
“ನೀನಾ? ಮತ್ಯಾಕೆ ಬಂದೆ” ಎಂದು ಕೇಳಿದಳು.
‘ನಾನ್ಯಾಕೆ ಬಂದೆ?’ ಉತ್ತರ ಹೊಳೆಯಲಿಲ್ಲ. ಬೆಪ್ಪನಂತೆ ಅವಳನ್ನೇ ನೋಡುತ್ತಿದ್ದವನು 2 ಕ್ಷಣದ ನಂತರ, ರಾಶಿ ರಾಶಿಯಾಗಿ ಇದ್ದ ಮರಳಿನ ಕಡೆ ಬೆರಳು ಮಾಡಿ “ಅಲ್ಲಿ ಹೆದರಿಕೆ ಆಗುತ್ತೆ.” ಎಂದು ತೊದಲಿದ.
ಕ್ಷಮಾ ಒಂದು ನಿಟ್ಟುಸಿರು ಬಿಟ್ಟು “ಒಳಗೆ ಬಾ” ಅಂದಳು.
ಮನೆಯನ್ನು ಬಹಳ ಸೊಗಸಾಗಿ ಜೋಡಿಸಲಾಗಿತ್ತು. ಎದುರುಗಡೆಯಿದ್ದ ಸೋಫಾದ ಮೇಲೆ ಸುಮ್ಮನೆ ಕುಳಿತುಕೊಂಡ. ಅವನ ಬಲಗಡೆಗೆ ಒಂದು ಬಾಲ್ಕನಿಯಿತ್ತು. ಅದರಾಚೆ ತೀರ ಕಾಣದಷ್ಟು ವಿಶಾಲವಾದ ಸಮುದ್ರ. ಅಲ್ಲಿಂದಲೇ ಬರುತ್ತಿತ್ತು ಅಲೆಗಳ ಶಬ್ದ. ಆದರೆ ಮನೆಯೊಳಗೆ ಮಾತ್ರ ಒಂದು ವಿಚಿತ್ರವಾದ ಮೌನ.
ಇವನನ್ನೇ ನೋಡ್ತಾ ನಿಂತಿದ್ದ ಕ್ಷಮಾ ಅದೇ ಪ್ರಶ್ನೆಯನ್ನ ಪುನಃ ಕೇಳಿದಳು. “ಇಲ್ಲಿಗ್ಯಾಕೆ ಬಂದೆ?”
“ನಿನ್ನ ಹತ್ತಿರ ಮಾತನಾಡಬೇಕು ಅಂತ ಅನ್ನಿಸಿತು” ಪ್ರಹ್ಲಾದ ಹೇಳಿದ.
“ಇಲ್ಲಿ ನಾನು ಒಬ್ಬಳೇ ಇರಬೇಕು ಅನ್ನೋದು ನನ್ನ ಆಸೆ. ಬೇರೆಯವರು ಬಂದು ನನ್ನ ಏಕಾಂತವನ್ನ ಹಾಳು ಮಾಡೋದು ನನಗೆ ಇಷ್ಟವಾಗಲ್ಲ” ಅಂದಳು. “ಅಷ್ಟಕ್ಕೂ ನನ್ನನ್ನ ಮಾತನಾಡಿಸೋ ಹಂಬಲ ನಿನಗ್ಯಾಕೆ?” ಕ್ಷಮಾಳ ಧ್ವನಿಯಲ್ಲಿ ಸಣ್ಣ ಅಸಹನೆ ಇತ್ತು.
“ನೀನಂದ್ರೆ ನನಗಿಷ್ಟ.” ಚುಟುಕಾಗೆ ಉತ್ತರಿಸಿದ.
“ಇಷ್ಟ ಇದ್ರೆ ಕಾಲೇಜಿನಲ್ಲಿ ಮಾತನಾಡಿಸಬೇಕಿತ್ತು. ಇಲ್ಲಿಗ್ಯಾಕೆ ಬಂದೆ?”
“ಮಾತನಾಡಿಸೋ ಪ್ರಯತ್ನ ಮಾಡಿದ್ನಲ್ಲ.. ನೀನೆ ಮಾತನಾಡಲಿಲ್ಲ. ಮುಖ ತಿರುಗಿಸಿಕೊಂಡುಬಿಟ್ಟೆ.” ಅವಳನ್ನೇ ದೂರುವಂತೆ ಹೇಳಿದ.
ಆವತ್ತು ಐ ವಾಸ್ ಇನ್ ಮಿಡ್ಲ್ ಆಫ್ ಆ ಕಾನ್ವರ್ಸೆಷನ್. ಆಮೇಲೆ ಯಾಕೆ ನನ್ ಹತ್ರ ಮಾತಾಡ್ಬೇಕು ಅಂತ ಅನ್ನಿಸ್ಲಿಲ್ಲ? ನನ್ನ ಕಡೆ ನೋಡೋದು ಬಿಟ್ಬಿಟ್ಟಿದ್ದೆ.” ಕ್ಷಮಾ ಕೇಳಿದಳು
“ಅವಮಾನ ಆಗೋಯ್ತು.. ಅಲ್ಲದೆ ಆ ರಾಕೇಶ ತುಂಬಾ ಅಪಹಾಸ್ಯ ಮಾಡ್ತ ಇದ್ದ.”
“ಹಾಗಾದರೆ ನನ್ ಹತ್ರ ಮಾತಾಡ್ಬೇಕು ಅನ್ನೋ ಆಸೆ ಇನ್ನೂ ಯಾಕಿದೆ?” ಕ್ಷಮಾ ಕೇಳಿದಳು.
“ರಾಕೇಶ ಅಪಹಾಸ್ಯ ಮಾಡಿದ ಅಂತ ನಿನ್ನ ಪರ್ಮನೆಂಟಾಗಿ ಮರೆಯೋಕೆ ಆಗುತ್ತಾ? ಅವನಿಗೇನು ಗೊತ್ತಾಗತ್ತೆ? ಸುಮ್ಮನೆ ಮಾತಾಡ್ತಾನೆ. ಅವನಿಗೆ ಪ್ರೀತಿ,ಪ್ರೇಮ, ಎಮೋಷನ್ಸ್ ಏನು ಗೊತ್ತಿಲ್ಲ. ನನ್ನನ್ನ ಆಡ್ಕೊಂಡು ನಗೋದು ಒಂದೇ ಗೊತ್ತಿರೋದು. ಬಾಲ ಒಂದು ಇಲ್ದೆ ಇರೋ ಕೋತಿ ತರ ಅವನು.”
ಅದನ್ನ ಕೇಳಿದ ಕ್ಷಮಾ ಜೋರಾಗಿ ನಕ್ಕಳು. ಪ್ರಹ್ಲಾದನ ಎದೆಯೆಲ್ಲಿ ಚಿಟ್ಟೆ ಹಾರಿದಂತ ಅನುಭವ.
ಅಷ್ಟರಲ್ಲಿ ಮತ್ತೆ ತೇಲಿಬಂದ ಅಲೆಯ ಶಬ್ದ ಕೇಳಿ ಪ್ರಹ್ಲಾದ ಬಾಲ್ಕನಿ ಕಡೆ ನೋಡಿದ. ಆ ಮರುಭೂಮಿ ಇವನಲ್ಲಿ ಹುಟ್ಟು ಹಾಕಿದ ಭಾವನೆಯ ತದ್ವಿರುದ್ದವಾದ ಭಾವನೆಗಳನ್ನು ಈ ಸಮುದ್ರ ಪ್ರಹ್ಲಾದನಲ್ಲಿ ತುಂಬುತ್ತಾ ಇತ್ತು. ಬಾಲ್ಕನಿಗೆ ಹೋಗಿ ಸಮುದ್ರವನ್ನೇ ನೋಡುತ್ತಾ “ಇಷ್ಟು ಶಾಂತವಾಗಿರೋ ಸಮುದ್ರನ ಯಾವಾಗ್ಲೂ ನೋಡಿರಲೇ ಇಲ್ಲ.” ಅಂದ.
“ಈ ಸಮುದ್ರ ಯಾವಾಗ್ಲೂ ಇಷ್ಟು ಶಾಂತವಾಗೆ ಇರಲ್ಲ. ಅಪರೂಪಕ್ಕೊಮ್ಮೆ ರೌದ್ರಾವತಾರ ತಾಳುತ್ತೆ.” ಕ್ಷಮಾ ಹೇಳಿದಳು.
“ಹೌದಾ? ನೋಡಿದ್ರೆ ಹಾಗೆ ಅನ್ನಿಸೋದೇ ಇಲ್ಲ.” ಅಂದ. “ಯಾವಾಗ ಆ ಬದಲಾವಣೆ ಆಗೋದು?”
“ಯಾವಾಗ ಬೇಕಾದ್ರೂ ಆಗಬಹುದು. ಹೇಳೋಕೆ ಆಗಲ್ಲ. ಬದಲಾವಣೆ ಥಟ್ ಅಂತ ಆಗಿಬಿಡತ್ತೆ”
“ನೀನು ಹೇಳೋದನ್ನ ಕೇಳ್ತಿದ್ರೆ, ಸಮುದ್ರದ ಆ ರೂಪವನ್ನೂ ನೋಡಬೇಕು ಅಂತ ಕುತೂಹಲ ಹುಟ್ಟುತ್ತಿದೆ..” ಪ್ರಹ್ಲಾದ ಹೇಳಿದ.
ಹೊರಗಡೆ ಇರೋ ಮರುಭೂಮಿನೇ ನೋಡಿ ಹೆದರಿದವನು ನೀನು.. ನನಗನ್ನಿಸುತ್ತೆ ಇದನ್ನು ನೋಡಿದರೆ ಹಾರ್ಟ್ ಫೈಲ್ ಆಗಿಬಿಡಬಹುದು ಅಂತ.. “ ಕ್ಷಮಾ ನಕ್ಕಳು.
ಪ್ರಹ್ಲಾದನಿಗೆ ಸ್ವಲ್ಪ ನಾಚಿಕೆಯಾಯಿತು. “ಹಾಹಾ.. ಹಾಗೇನಿಲ್ಲ.” ಅಂತಂದು ಸುಮ್ಮನಾದ.
“ಹಾಗಿದ್ರೆ ಆ ಸಮುದ್ರವನ್ನು ಎದುರಿಸೋ ಧೈರ್ಯ ಇದ್ಯಾ? ಆ ಸಮಯದಲ್ಲೂ ಇಲ್ಲಿಗೆ ಬರ್ತೀಯಾ?” ಕ್ಷಮಾ ಕೇಳಿದಳು.
ಅವಳು ಕೇಳಿದ ಪ್ರಶ್ನೆಯ ಹಿಂದಿರುವ ಅರ್ಥ ಪೂರ್ತಿಯಾಗಿ ಹೊಳೆಯಲಿಲ್ಲ. ಆದರೆ ಅವನು ಅದೇ ಪ್ರಶ್ನೆಯನ್ನ ತನಗೆ ತಾನೇ ಕೇಳಿಕೊಂಡಾಗ ಸಿಕ್ಕ ಉತ್ತರ ತುಂಬಾ ಸ್ಪಷ್ಟವಾಗಿತ್ತು. “ಇಲ್ಲಿಗೆ ಬರೋಕೆ ಅವಕಾಶ ಸಿಗುತ್ತೆ ಅಂತಂದ್ರೆ.. ಹೀಗೆ ನಿನ್ನ ಜೊತೆ ಮಾತನಾಡೋಕೆ ಅವಕಾಶ ಸಿಗುತ್ತೆ ಅಂತಂದ್ರೆ.. ಎಸ್.. ಖಂಡಿತ ಬರ್ತೀನಿ. ಎಷ್ಟೇ ದೊಡ್ಡ ಅಲೆ ಬಂದರು ಅಡ್ಡಿಯಿಲ್ಲ. ಎದುರಿಸ್ತೀನಿ”
“ಎಲ್ಲ ಹುಡುಗರು ಹೇಳೋ ಡಯಲೋಗನ್ನೇ ಹೇಳ್ತ ಇದಿಯ” ಅಂತ ನಕ್ಕಳು.
ಇಂತಹ ಮಾತಿಗೆ ಏನು ಉತ್ತರ ಕೊಡುತ್ತಾರೆ? ‘ಇಲ್ಲ, ನಾನು ಬೇರೆಯವರಂತೆ ಅಲ್ಲ’ ಅಂತ ಹೇಳಿದರೆ ಅದಕ್ಕೂ ಇದೆ ಮಾತನ್ನೇ ಹೇಳಬಹುದು. ಹಾಗಂತ ಸುಮ್ಮನೆ ಇದ್ದರೆ.. ಅವಳ ಮಾತನ್ನ ಒಪ್ಪಿಕೊಂಡಂತೆ ಆಗುತ್ತೆ. ಏನು ಹೇಳಬೇಕು ಅಂತ ಗೊತ್ತಾಗದೆ ಎರಡು ನಿಮಿಷ ಸಮುದ್ರವನ್ನೇ ದಿಟ್ಟಿಸುತ್ತಾ ನಿಂತುಬಿಟ್ಟ.
“ಮೊದಲ ನೋಟದಲ್ಲೇ ನಿನ್ನ ಕಂಡು, ನನಗಾದ ಮೋಡಿಗೆ..
ಕ್ಷಣಕೊಮ್ಮೆ ಉಕ್ಕಿ ಹರಿವ ನನ್ನ ಮನದ ಹಾಡಿಗೆ..
ಇರುವುದೊಂದೇ ಕಾರಣ.. ಅದು ನಿನ್ನ ಕಣ್ಣ ಕಾಡಿಗೆ..”
ಮನಸ್ಸಿನ ಯಾವ ಮೂಲೆಯಲ್ಲಿ ಹುದುಗಿತ್ತೋ ಈ ಕವನ.. ಇದ್ದಕ್ಕಿದ್ದಂತೆ ಅವನ ಬಾಯಿಯಿಂದ ಹೊರಬಿದ್ದಿತು.
“ಬೇರೆ ಹುಡುಗರೂ ಇಂತ ಕವನ ಹೇಳ್ತಾರ ನಿನಗೆ?” ಅಂತ ಕೇಳಿ ತಿರುಗಿ ನೋಡಿದರೆ ಕ್ಷಮಾ ಅಲ್ಲಿರಲೇ ಇಲ್ಲ.
ಪ್ರಹ್ಲಾದ ಅವಳನ್ನು ಹುಡುಕಿಕೊಂಡು ಮನೆಯೆಲ್ಲ ಸುತ್ತಿದ, ಅವಳೆಲ್ಲು ಕಾಣಿಸಲಿಲ್ಲ. ಮೆಟ್ಟಿಲು ಹತ್ತಿ ಮಹಡಿಯ ಮೇಲೆಲ್ಲಾ ಹುಡುಕಿದ. ಆದರೆ ಅವಳ ಪತ್ತೆಯೇ ಇರಲಿಲ್ಲ. ದಿಗಿಲಾಯಿತು. ಕೆಳಗೆ ಹಾಲಿನಲ್ಲಿ ಏನೋ ಶಬ್ದವಾದಂತೆ ಕೇಳಿಸಿತು. ಗಡಿಬಿಡಿಯಲ್ಲಿ ಮೆಟ್ಟಿಲು ಇಳಿಯುತ್ತಿರುವಾಗ ಕಾಲು ಜಾರಿ ಇನ್ನೇನು ಬೀಳಬೇಕು ಅನ್ನುವಷ್ಟರಲ್ಲಿ ಎಚ್ಚರವಾಗಿಹೋಯಿತು. ಪಕ್ಕದಲ್ಲಿ ಅವನ ತಮ್ಮ ಅರ್ಧ ಹಾಸಿಗೆಯ ಮೇಲೆ ಇನ್ನರ್ಧ ನೆಲದ ಮೇಲೆ ಮಲಗಿದ್ದನು.
***
ದಿನಗಳು ಕಳೆದವು. ರಜೆ ಮುಗಿಸಿ ಕೋಚಿಂಗ್ ಕ್ಲಾಸ್ ಸೇರಲು, ಬೆಂಗಳೂರಿಗೆ ವಾಪಸ್ ಬಂದು ಆಯಿತು. ಆದರೆ ಆ ಕನಸು ಮಾತ್ರ ಒಂದು ದಿನವೂ ಬೀಳಲಿಲ್ಲ. ರಾಕೇಶ ಒಂದು ವಾರ ಮುಂಚೆಯೇ ಹಿಂದಿರುಗಿದ್ದರೂ, ಅವನಿಗೆ ತಾನು ಕಂಡ ಕನಸಿನ ಬಗ್ಗೆ ಏನು ಹೇಳಿರಲಿಲ್ಲ. ಹೇಳಿದರೆ ಮತ್ತೆ ಅಪಹಾಸ್ಯಕ್ಕೀಡಾಗಬಹುದು ಎಂದು ಅನುಮಾನವಿತ್ತು ಪ್ರಹ್ಲಾದನಿಗೆ.
ಅವರಿಗೆ ಕೋಚಿಂಗ್ ಕ್ಲಾಸ್ ಆಗಲೇ ಶುರುವಾಗಿತ್ತು. ಮೊದಲ ದಿನ ತಮ್ಮ ಕಾಲೇಜಿನಲ್ಲೇ ಆಯೋಜಿಸಲಾಗಿದ್ದ ಕೋಚಿಂಗ್ ಕ್ಲಾಸಿನಲ್ಲಿ ಕ್ಷಮಾಳನ್ನು ನೋಡಿ ಪ್ರಹ್ಲಾದನಿಗೆ ಬಹಳ ಖುಷಿ ಆಯಿತು. ಮಧ್ಯಾಹ್ನ ಊಟದ ಸಮಯದಲ್ಲಿ ರಾಕೇಶ ಮತ್ತು ಪ್ರಹ್ಲಾದ ಇಬ್ಬರು ಕಾಂಟೀನಲ್ಲಿ ಕೂತು ಫ್ರೈಡ್ ರೈಸ್ ತಿನ್ನುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಕ್ಷಮಾ ನೇರವಾಗಿ ಇವರ ಕಡೆಗೆ ಬಂದಳು. ಎಂದೂ ಇಲ್ಲದ ಈ ಹೊಸ ವರಸೆ ಅವರಿಗೆ ಅರ್ಥ ಆಗಲಿಲ್ಲ. ಅವಳು ನೇರವಾಗಿ ಬಂದು ಪ್ರಹ್ಲಾದನ ಎದುರಿಗಿದ್ದ ಕುರ್ಚಿಯ ಮೇಲೆ ಕುಳಿತು, “ನನ್ನ ಕರ್ಚೀಫ್ ನಿನ್ನ ಹತ್ತಿರ ಇದೆಯಲ್ವಾ?” ಎಂದು ಕೇಳಿದಳು. ಅನಾಮತ್ತಾಗಿ ಊಹಿಸದ ಪ್ರಶ್ನೆ ಕೇಳಿಸಿಕೊಂಡು ಪ್ರಹ್ಲಾದ ತಬ್ಬಿಬ್ಬಾದ. ಇವಳ ತಂದೆ ಪೋಲೀಸ್ ಅಂದೆನೋ ಗೊತ್ತಿತ್ತು. ಆದರೆ ಇವಳು ಇಷ್ಟು ದೊಡ್ಡ ಡೀಟೆಕ್ಟಿವ್ ಎಂದು ಗೊತ್ತಿರಲಿಲ್ಲ. ಇವಳಿಗೆ ನನ್ನ ಹತ್ತಿರ ಕರ್ಚೀಫ್ ಇರೋ ವಿಷ್ಯ ತಿಳಿದಿದ್ದಾದರೂ ಹೇಗೆ? ಅನ್ನುವ ಆಲೋಚನೆಯಲ್ಲಿಯೇ ಇರುವಾಗ, ಪಕ್ಕದಲ್ಲಿದ್ದ ರಾಕೇಶ “ಇಲ್ಲ.. ಇವನ ಹತ್ರ ನೀಂ ಕರ್ಚೀಫ್ ಹೇಗೆ ಇರೋಕೆ ಸಾಧ್ಯ” ಎಂದು ಕೇಳಿದ.
ಅವಳ ಮುಖ ಇನ್ನೂ ಗಂಭೀರಗೊಂಡಿತು. ಪ್ರಹ್ಲಾದನನ್ನೇ ನೋಡುತ್ತಾ ರಾಕೇಶ ಹೇಳಿದ ಮಾತು ಪ್ರಹ್ಲಾದನೇ ಹೇಳಿದನು ಎಂಬಂತೆ “ಸುಳ್ಳು ಹೇಳಬೇಡ. ಅದು ನಿನ್ನ ಹತ್ತಿರವೇ ಇದೆ ಅನ್ನೋದು ನನಗೆ ಗೊತ್ತು.” ಅಂದಳು.
“ಇಲ್ಲ.. ನಿಜವಾಗ್ಲೂ ಇಲ್ಲ.” ಪ್ರಹ್ಲಾದ ಮತ್ತೆ ಹೇಳಿದ.
“ಹಾಗಾದರೆ ನಿನ್ನ ಜೇಬಿನಲ್ಲಿ ಏನಿದೆ ತೋರಿಸು. ಇಲ್ಲಾಂದ್ರೆ ಪ್ರಿನ್ಸಿಪಾಲ್ ಹತ್ರ ಕಂಪ್ಲೇಂಟ್ ಕೊಡ್ತೀನಿ” ಅಂತ ಬೆದರಿಸಿದಳು. ಇಷ್ಟು ದಿನ ಚೆನ್ನಾಗಿ ಓದಿ ಉಳಿಸಿಕೊಂಡಿದ್ದ ಒಳ್ಳೆಯ ಹೆಸರು ಹಾಳಾಗುವುದು ಅವನಿಗೂ ಇಷ್ಟ ಇರಲಿಲ್ಲ. ನಿಧಾನವಾಗಿ ತನ್ನ ಜೇಬಿನಿಂದ ಕರ್ಚೀಫ್ ತೆಗೆದು ಟೇಬಲ್ ಮೇಲೆ ಇಟ್ಟ.
“ಹ್ಮ್.. ನಿನ್ನ ಹತ್ರಾನೇ ಇದೆ ಅಲ್ವಾ? ಮತ್ಯಾಕೆ ಇಲ್ಲ ಅಂತ ಸುಳ್ಳು ಹೇಳ್ತಿದ್ದೆ”
“ಸುಳ್ಳು ಹೇಳಬೇಕು ಅಂತ ಅಲ್ಲ. ನೀನು ಕೇಳಿದ ಕ್ಷಣಕ್ಕೆ ಬೇರೆ ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ” ಅಂತ ಹೇಳಿದ.
ಇಷ್ಟು ದಿನ ನನ್ನ ಪ್ರಾಣ ಸ್ನೇಹಿತ ಏನು ಮುಚ್ಚಿಟ್ಟಿರಲಿಲ್ಲ.. ಯಾವಾಗ್ಲೂ ಮುಚ್ಚಿಡುವುದೂ ಇಲ್ಲ ಅಂತ ತಿಳಿದುಕೊಂಡಿದ್ದ ರಾಕೇಶನಿಗೆ ಇದನ್ನು ಕಂಡು ಆಶ್ಚರ್ಯವಾಯಿತು. ಹಾಗೆಯೇ ಸಣ್ಣ ನೋವು ಆಯಿತು. ಏನು ಮಾತನಾಡದೆ ಕುಳಿತಲ್ಲಿಂದ ಎದ್ದು ಅವನು ಕ್ಯಾಂಟೀನಿಂದ ಹೊರಗೆ ಹೋಗಿಬಿಟ್ಟ.
ಮೆಲ್ಲನೆ ನಕ್ಕು “ಅವನಿಗೆ ಏನು ಅರ್ಥ ಆಗಲ್ಲ ಅಂತಿದ್ದೆ.. ನೋಡು.. ನಾವಿಬ್ಬರೂ ಮನಸು ಬಿಚ್ಚಿ ಮಾತಾಡ್ತಾ ಇಲ್ಲ ಅಂತ ಅವನಿಗೆ ಗೊತ್ತಾಗಿ, ನಮಗೆ ಪ್ರೈವಸೀ ಕೊಟ್ಟು ಹೊರಗೆ ಹೋದ” ಕ್ಷಮಾ ಹೇಳಿದಳು.
ಆಗಲೇ ಬಹಳ ಕಂಗಾಲಾಗಿದ್ದ ಪ್ರಹ್ಲಾದನಿಗೆ ಈ ಮಾತು ಕೇಳಿ ಇನ್ನೂ ಜಾಸ್ತಿ ಕನ್ಫ್ಯೂಷನ್ ಆಯಿತು. ‘ನಾನು ಹೇಳಿದ್ನಾ? ಯಾವಾಗ’ ಎಂದು ಯೋಚಿಸ ತೊಡಗಿದ. ಎರಡು ಸೆಕೆಂಡಿನ ನಂತರ ನೆನಪಾಯಿತು ಅದು ಅವನು ಕನಸಿನಲ್ಲಿ ಹೇಳಿದ್ದುದು. ಆದರೆ ಇವಳಿಗೆ ಹೇಗೆ ಗೊತ್ತಾಯ್ತು?
ಅವನ ಮನಸ್ಸನ್ನು ಓದಿದಂತೆ ಅವಳ ಮುಖದಲ್ಲಿದ್ದ ಆ ತುಂಟ ನಗು ಹಾಗೆ ಇತ್ತು. “ನನಗೆ ಹೇಗೆ ಗೊತ್ತಾಯ್ತು ಅಂತ ಯೋಚನೆ ಮಾಡ್ತ ಇದೀಯಾ?” ಅಂತ ಕೇಳಿದಳು.
ಪ್ರಹ್ಲಾದ ಇನ್ನೂ ಷಾಕ್ನಿಂದ ಹೊರಬಂದಿರಲಿಲ್ಲ. ಅವನಿನ್ನೂ ಒಬ್ಬ ಮೂಕ ಪ್ರೇಕ್ಷಕನಾಗೆ ಇದ್ದ.
“ಹ್ಮ್.. ಅಷ್ಟೊಂದು ಕನ್ಫ್ಯೂಸ್ ಆಗಬೇಡ. ರಜ ದಿನಗಳಲ್ಲಿ ನಾನು ನಿನ್ನ ಕನಸಿನಲ್ಲಿ ಬಂದಿದ್ದೆ ಅಲ್ವಾ?” ಅಂದಳು.
“ಹೌದು” ಎಂದು ತಲೆ ಆಡಿಸಿದ.
“ಆದ್ರೆ ನಿಜ ಏನು ಗೊತ್ತಾ?” ಡ್ರಮ್ಯಾಟಿಕ್ ಎಫ್ಫೆಕ್ಟ್‌ಗೆ ಎನ್ನುವಂತೆ ಒಂದು ಪಾಸ್ ಕೊಟ್ಟಳು. “ನಾನು ನಿನ್ನ ಕನಸಲ್ಲಿ ಬಂದಿದ್ದಲ್ಲ. ನೀನೇ ನನ್ನ ಕನಸಲ್ಲಿ ಬಂದಿದ್ದು.”
ಅವನಿಗೆ ಇನ್ನೂ ಅರ್ಥವಾಗಿರಲಿಲ್ಲ. “ನೋಡು ಪ್ರಹ್ಲಾದ್, ನಾನು ನನ್ನದೇ ಆದ ಒಂದು ಕನಸಿನ ಲೋಕವನ್ನ ಕಟ್ಟಿಕೊಂಡಿದೀನಿ. ಈ ಕರ್ಚೀಫ್ನಲ್ಲಿ ಇರುವ ಪರಿಮಳವೇ ಆ ಲೋಕದ ಕೀಲಿ ಕೈ.”
“ಓಕೇ..” ಅಂದ.. ಈಗ ನಡೆಯುತ್ತಿರುವುದು ಕನಸೇ ಇರಬೇಕು ಅನ್ನಿಸಿತು. ಇಲ್ಲದಿದ್ದರೆ ಕ್ಷಮಾ ನನ್ನೊಂದಿಗೆ ಮಾತನಾಡುವುದೇ? ಅದು ನಗು ನಗುತ್ತಾ?
ಧೈರ್ಯ ತಂದುಕೊಂಡು “ಸುಮ್ನೆ ತಮಾಷೆ ಮಾಡ್ಬೇಡ.. ನನ್ನನ್ನ ಅಷ್ಟು ಸ್ಟುಪಿಡ್ ಆಂದೋಕೊಂಡಿದೀಯ.. ಎಲ್ಲರ ಮುಂದೆ ನನ್ನನ್ನ ಮೂರ್ಖನನ್ನಾಗಿ ಮಾಡಿ ಮತ್ತೆ ಅವಮಾನ ಮಾಡ್ಬೇಕು ಅನ್ನೋದು ನಿನ್ನ ಉದ್ದೇಶ ಅಲ್ವಾ?” ಎಂದು ಕೇಳಿದ ಸಿಟ್ಟಿನಲ್ಲಿಯೇ. “ನಿನ್ನ ಕರ್ಚೀಫ್ ತಗೊಂಡಿರೋದಕ್ಕೆ ಸಾರೀ.. ತಪ್ಪಾಯ್ತು.” ಎಂದು ಹೇಳಿ ಎದ್ದು ಹೊರಡಲು ಅನುವಾದ.
ಅವನ ಕೈ ಹಿಡಿದು ಎಳೆದು ಕೂರಿಸಿದ ಕ್ಷಮಾ “ಆ ಕನಸಿನ ಲೋಕಕ್ಕೆ ಈ ರಿಯಾಲಿಟಿಗೆ ಏನು ಡಿಫರೆನ್ಸ್ ಗೊತ್ತಾ? ಕನಸಿನಲ್ಲಿ ನಿನಗೆ ಹೆದರಿಕೆ ಆದಾಗ ಓಪನ್ ಆಗಿಯೇ ಹೆದರಿಕೆ ಆಗ್ತಿದೆ ಅಂತ ಒಪ್ಕೊಂಡಿದ್ದೆ. ಆದ್ರೆ ನಿಜ ಜೀವನದಲ್ಲಿ ನಿನ್ನ ಈಗೊ, ಅಂದರೆ ಅಹಂ ಅಡ್ಡ ಬರುತ್ತೆ. ನೀನು ಚೆನಾಗಿ ಓದ್ತೀಯ ಅನ್ನೋ ಈಗೊ, ಸಣ್ಣ ಹಳ್ಳಿಯಿಂದ ಬಂದಿದೀನಿ ಇವಳು ಸಿಟೀ ಯಲ್ಲಿ ಬೆಳೆದೀರೋ ಹುಡುಗಿ ಅನ್ನೋ ಇನ್ಫೀರಿಯಾರಿಟೀ ಕಾಂಪ್ಲೆಕ್ಸ್ ಕೂಡ ನಿನಗಿದೆ. ಅದೆಲ್ಲ ಸೇರಿ ನೀನು ನೀನಾಗೆ ಇರೋದಿಲ್ಲ.” ಅಂದಳು.
“ಹಾಗೇನಿಲ್ಲ” ಅಂದ.
“ನೀನು ನನಗೆ ಹೇಳಿದ ಮೊದಲ ಮಾತೇನು? ಇಲ್ಲಲ್ಲ.. ಕನಸಿನಲ್ಲಿ?”
“ಏನು?”
ನಿನಗೆ ಮರುಭೂಮಿ ಅಂದ್ರೆ ಹೆದರಿಕೆ ಆಗ್ತಿದೆ ಅಂತ. ಅಷ್ಟು ಓಪನ್ ಆಗಿ ಹೇಳಿದ್ದನ್ನ ಕೇಳಿ ನನಗೆ ಖುಷಿಯಾಗಿತ್ತು. ಆ ಕನಸಿನ ಲೋಕದ ವೈಶಿಷ್ಟ್ಯನೇ ಅಂತದ್ದು. ಮನುಷ್ಯನ ಮನಸ್ಸಿನ ಆಳದ ಹೆದರಿಕೆಗಳು ಮುಚ್ಚು ಮರೆಯಿಲ್ಲದೆ ಎದುರಿಗೆ ಕಾಣಿಸುತ್ತೆ. ಅವನ ಆಸೆಗಳು ಎದುರಿಗೆ ಕಾಣಿಸುತ್ತೆ. ನೀನು ನನಗೆ ಅಲ್ಲಿ ನಗ್ನವಾಗಿ ಕಂಡೆ. ದೈಹಿಕತೆಯಿಂದ ಅಲ್ಲ.. ಆದರೆ ಭಾವನೆಯ ಲೆಕ್ಕದಲ್ಲಿ. ಅದು ನನಗೆ ಇಷ್ಟ ಆಯ್ತು. ನೀನು ನಿನ್ನ ನಿಜವಾದ ಗುಣಗಳ ಬಗ್ಗೆ ಮುಜುಗರ ಪಡಬೇಕಾದ ಅವಶ್ಯಕತೆ ಇಲ್ಲ.” ಅಂದಳು.
ಪ್ರಹ್ಲಾದನಿಗೆ ಏನು ಹೇಳಬೇಕೆಂದು ಹೊಳೆಯಲಿಲ್ಲ. “ಕನಸಿನಲ್ಲಿ ಕಂಡಿದ್ದು ನಿಜವಾದ ನಾನಲ್ಲ. ಇದೆ ನಿಜವಾದ ನಾನು” ಅಂತ ಹೇಳಿದ.
ಹೌದಾ.. ಸರಿ ಬಿಡು. ಇನ್ನೂ ಮೇಲೆ ನಿನ್ನ ಹತ್ತಿರ ಮಾತನಾಡಲ್ಲ. ನನಗೆ ಇಷ್ಟವಾಗಿದ್ದು ಆ ಪ್ರಹ್ಲಾದ್. ನನ್ನ ಕನಸಿನವನು. ಇವನಲ್ಲ” ಅಂತ ಹೇಳಿ ಕರ್ಚೀಫ್ ತೆಗೆದುಕೊಂಡು ಎದ್ದು ಹೊರಟು ಬಿಟ್ಟಳು.
ಅವಳು ಹೇಳಿದ ಮಾತು ಪ್ರಹ್ಲಾದನ ಎದೆ ಚುರ್ರೆನ್ನುವಂತೆ ಮಾಡಿತು. ಈ ಸಲ ಅವಳನ್ನು ತಡೆದು ನಿಲ್ಲಿಸುವ ಕೆಲಸ ಮಾಡಿದ್ದು ಪ್ರಹ್ಲಾದ.
ಒಂದು ನಿಮಿಷ ಇರು..” ಅಂತಂದ. ಅವಳು ಹೊರಟಲ್ಲಿಯೇ ಒಂದು ಕ್ಷಣ ನಿಂತಳು. “ಕೂತ್ಕೊ” ಅಂತ ಹೇಳಿದ. ಆದರೆ ಅವಳು ಅಲುಗಾಡಲಿಲ್ಲ.
“ಪ್ಲೀಸ್.. “ ಮತ್ತೆ ಗೋಗರೆದ.
ಅವಳು ಸುಮ್ಮನೆ ಕುಳಿತಳು. ಅವನೇನೋ ಹೇಳಬೇಕು ಅಂತ ಬಾಯ್ಬಿಡುವ ಸಮಯಕ್ಕೆ ಸರಿಯಾಗಿ “ನನಗೂ ಒಂದು ಫ್ರೈಡ್ ರೈಸ್ ಆರ್ಡರ್ ಮಾಡು” ಅಂದಳು.
ಇವನು ಯಂತ್ರ ಮಾನವನಂತೆ ಎದ್ದು ಹೋಗಿ ಒಂದು ಪ್ಲೇಟ್ ಫ್ರೈಡ್ ರೈಸ್ ತಗೊಂಡು ಬಂದ.
“ಹ್ಮ್.. ಈಗ ಹೇಳು”
“ನೀನು ಹೇಳ್ತಿರೋದೊಂದು ನಂಬೋಕಾಗ್ತಿಲ್ಲ. ಆದ್ರೆ ನೀನು ಹೇಳಿದ್ದೆಲ್ಲ ನಿಜ.. ನನಗೆ ಒಂದು ಅರ್ಥ ಆಗ್ತಿಲ್ಲ” ಅಂದ. ಅವಳು ಏನು ಮಾತನಾಡದೆ ಫ್ರೈಡ್ ರೈಸ್ ತಿನ್ನುವುದರಲ್ಲೇ ಮಗ್ನಳಾಗಿದ್ದಳು.
“ಅದನ್ನ ನಿಜ ಅಂತಾನೆ ಅಂದುಕೊಳ್ಳೋಣ.. ಆದ್ರೆ ಈ ಕರ್ಚೀಫ್ನಿಂದ ನಿನ್ನ ಕನಸಲ್ಲಿ ನಾನು ಬರೋಕೆ ಹೇಗೆ ಸಾಧ್ಯ? ಅದರ ಪರಿಮಳ.. ಏನದು?” ಅಂತ ಕೇಳಿದ.
“ಅದು ಸೀಕ್ರೆಟ್. ಇನ್ನೊಂದು ದಿನ ಹೇಳಿತೀನಿ. ಎಲ್ಲವನ್ನೂ ಇವತ್ತೇ ಹೇಳೋಕಾಗುತ್ತಾ?” ಎಂದಷ್ಟೇ ಹೇಳಿ ಮತ್ತೆ ತಿನ್ನಲು ಶುರು ಮಾಡಿದಳು.
“ಸರಿ.. ಸರಿ.. ಓಕೇ. ಆದರೆ ಕನಸಿನಲ್ಲಿ ಇದ್ದಿದ್ದು ನಿಜವಾದ ನಾನಲ್ಲ. ಅದು ನನ್ನ ಆಕಾಂಕ್ಷೆ ಮಾತ್ರ.. ನಾನು ಏನು ಆಗಬೇಕು ಅಂತ ಅಂದುಕೊಂಡಿದಿನಲ್ಲ.. ಅದು. ಈ ಹೆದರಿಕೆಯನ್ನ ಓಪನ್ ಆಗಿ ಹೇಳಿಕೊಳ್ಳೋಕೆ ಆಗದೆ ಇರೋ ಹೆದರುಪುಕ್ಕಲನೆ ನಿಜವಾದ ಪ್ರಹ್ಲಾದ.” ಅಂತಂದ.
“ಹಂಗ.. ಸರಿ ಬಿಡು. ನನಗೆ ನಿನಗಿಂತ ಕನಸಿನ ಪ್ರಹ್ಲಾದಾನೆ ಇಷ್ಟ ಆದ. ನಾನು ಅವನ ಹತ್ರಾನೇ ಮಾತಾಡ್ತೀನಿ” ಅಂದಳು.
ಕೊಂಚ ಬೇಸರವಾಯಿತು “ಆದರೆ ನಾನು ಅವನ ತರನೇ ಆಗೋಕೆ ಪ್ರಯತ್ನ ಪಡ್ತೀನಿ.. ಅಲ್ಲ.. ಆಗ್ತೀನಿ.. ನಂ ಹತ್ರಾನೂ ಮಾತನಾಡಬಹುದಲ್ಲ?” ಅಂತ ಸಣ್ಣಗೆ ಕೇಳಿದ.
ಅವಳು ನಕ್ಕು “ಹ್ಮ್.. ನನಗೆ ಅರ್ಥ ಆಗುತ್ತೆ.. ಬದಲಾವಣೆಗೂ ಟೈಮ್ ಬೇಕಾಗತ್ತೆ.. ನೀನು ನಿಧಾನವಾಗೆ ಬದಲಾಗು.. ಆದರೆ ನೀನು ಬದಲಾಗೋ ತನಕ ನಾನು ಮಾತ್ರ ಆ ಕನಸಿನವನ ಹತ್ತಿರವೇ ಮಾತನಾಡೋದು..” ಎಂದು ತುಂಟ ನಗೆ ಬೀರಿದಳು.
ಅಷ್ಟರಲ್ಲಿ ಅವಳ ಪ್ಲೇಟ್ ಖಾಲಿ ಆಗಿತ್ತು. ಎದ್ದು “ಇನ್ನೂ ಬರ್ತೀನಿ” ಅಂತ ಹೇಳಿ ಹೊರಟಳು. ಇವತ್ತು ಆ ಬಿಳಿ ಕರ್ಚೀಫ್ ತೆಗೆದು ಕೊಂಡಿದ್ದರೂ, ಅವಳು ತಂದಿದ್ದ ನೀಲಿ ಬಣ್ಣದ ಕರ್ಚೀಫ್ ಟೇಬಲ್ ಮೇಲೆಯೇ ಇತ್ತು.
ಪ್ರಹ್ಲಾದ ಅವಳನ್ನ ಕರೆದು ಕರ್ಚೀಫ್ ಬಿಟ್ಟು ಹೋಗ್ತಾ ಇದೀಯಾ.. ತಗೋ ಅಂತ ಹೇಳಿದ.
ಅವಳು ತಿರುಗಿ ನೋಡಿ ನಕ್ಕು “ಅದು ನಿನಗೆ.. ನನ್ನ ಕನಸಿನ ಲೋಕದ ಕೀಲಿ ಕೈ. ಅದಿಲ್ಲ ಅಂದ್ರೆ ನಾನು ನನ್ನ ಹುಡುಗನ ಹತ್ರ ಹೇಗೆ ಮಾತನಾಡೋದು?” ಅಂತ ಕೇಳಿದಳು.
ಅವನಿಗೆ ಆದ ಖುಷಿಗೆ ಪಾರವೇ ಇರಲಿಲ್ಲ.
“ಜಾಸ್ತಿ ಖುಷಿ ಪಡ್ಬೇಡ. ಒಳ್ಳೆ ಹುಡುಗ ಅಂತ ಕನಸಿಗೆ ಎಂಟ್ರಿಗೆ ಪರ್ಮಿಶನ್ ಕೊಡ್ತಾ ಇದೀನಿ. ಮಿಸ್‌ಯೂಸ್ ಮಾಡ್ಕೊಂಡ್ರೆ.. ರೌದ್ರಾವತಾರ ಹೊತ್ತ ಸಮುದ್ರ ನೋಡಬೇಕಾಗುತ್ತೆ” ಅಂದಳು.. “ಅಷ್ಟೇ ಅಲ್ಲ.. ನೀನು ಕವನ ಚೆನ್ನಾಗೇ ಹೇಳ್ತೀಯ.. “ ಅವಳು ತನ್ನ ಕವನವನ್ನ ಕೇಳಿಸಿಕೊಂಡಿದ್ದಾಳೆ.. ಅಷ್ಟೇ ಅಲ್ಲ ಅದು ಅವಳಿಗೆ ಇಷ್ಟನೂ ಆಗಿದೆ ಅಂತ ಗೊತ್ತಾಗಿ ಅವನಿಗೆ ಸಂತೋಷವಾಯಿತು. “ಇವತ್ತು ಬಂದಾಗ ಮತ್ತೊಂದು ಕವನ ಹೇಳಬೇಕು.. ಮೊದಲು ಹೇಳಿದ ಕವನಕ್ಕಿಂತ ಚೆನಾಗಿರಬೇಕು.. ಇಲ್ಲ ಅಂದ್ರೆ ನೆಕ್ಸ್ಟ್ ಟೈಮ್ ಮನೆ ಬಾಗಿಲನ್ನೇ ತೆಗೆಯಲ್ಲ ನೋಡು” ಎಂದು ಹೇಳಿ ತಾನು ತಿಂದ ಫ್ರೈಡ್ ರೈಸ್ ನಾ ದುಡ್ಡನ್ನ ಅವನ ಜೇಬಿನೊಳಗೆ ಇಟ್ಟು ಹೊರಟು ಹೋದಳು.
Love,
Priyanka.
Comments
Post a Comment